ಸಂತಾಲರು
	ಭಾರತದ ಪೂರ್ವಭಾಗದಲ್ಲಿ ವಾಸಿಸುತ್ತಿರುವ ಒಂದು ಪ್ರಮುಖ ಬುಡಕಟ್ಟು. ಜನಸಂಖ್ಯೆ 32,50,000. ಬಿಹಾರ ಪಶ್ಚಿಮ ಬಂಗಾಲ ಮತ್ತು ಒರಿಸ್ಸ ರಾಜ್ಯಗಳಲ್ಲಿ ಕಾಣಬರುವ ಅತಿ ದೊಡ್ಡ ಪರಿಶಿಷ್ಟ ಬುಡಕಟ್ಟು. ಅಸ್ಸಾಮ್, ಮೇಘಾಲಯ ರಾಜ್ಯಗಳು ಇವರನ್ನು ಪರಿಶಿಷ್ಟ ವರ್ಗವೆಂದು ಪರಿಗಣಿಸಿಲ್ಲ. ಇವರು ಇಂದಿಗೂ ಗುಡ್ಡಬೆಟ್ಟಗಳ ತಪ್ಪಲುಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಕಾಡುವಾಸಿಗಳಾಗಿರುವ ಈ ಜನರ ಪ್ರಧಾನ ವೃತ್ತಿ ಬೇಟೆ. ಈಗೀಗ ಕೃಷಿ ಮತ್ತು ಪಶುಸಂಗೋಪನೆಯನ್ನೂ ಅವಲಂಬಿಸಿದ್ದಾರೆ. ಆದರೆ ಇವರು ಕೃಷಿ ಕೆಲಸವನ್ನು ನಿಯಮಿತವಾಗಿ ನಡೆಸಿಕೊಂಡು ಹೋಗುವವರಲ್ಲ. ಇದಕ್ಕೆ ಇವರ ಅಲೆಮಾರಿ ಜೀವನವೇ ಕಾರಣ. ಸಂತಾಲಿ ಇವರ ಮನೆಮಾತು. ಹಳೆಯ ತಲೆಮಾರಿನವರಿಗೆ ಬಿಹಾರಿ ಮತ್ತು ಬಂಗಾಲಿ ಭಾಷೆಗಳು ತಿಳಿದಿವೆ. 

	ಸಂತಾಲರ ತಂಡಕ್ಕೆ ಹಿರಿಯ ಮುಖಂಡನೊಬ್ಬನಿರುತ್ತಾನೆ. ಅವನಿಗೆ ಕೆಲವು ಸಹಾಯಕರಿರುತ್ತಾರೆ. ಅವರ ಸಹಾಯದಿಂದ ಮುಖಂಡ ಅನೇಕ ಧಾರ್ಮಿಕ ಸಂಪ್ರದಾಯಗಳನ್ನು ನಿರ್ವಹಿಸುತ್ತಾನೆ. ಸಂತಾಲರು ವಾಸಿಸುತ್ತಿರುವ ಹಳ್ಳಿಗಳನ್ನು ಒಟ್ಟಾಗಿ ಪರಗಣ ಎಂದು ಕರೆಯುತ್ತಾರೆ. 

	ಸಂತಾಲರದು ಪಿತೃಪ್ರಧಾನ ಕುಟುಂಬ. ಇವರಲ್ಲಿ ಹನ್ನೆರಡು ಕುಲಗಳಿವೆ. ಇವುಗಳಲ್ಲಿ ಅನೇಕ ಉಪಕುಲಗಳೂ ಉಂಟು. ಇವು ಪಾರಂಪರಿಕವಾಗಿ ಬಂದಿರುವಂಥವು. ಒಂದೇ ಕುಲಕ್ಕೆ ಸೇರಿದವರಲ್ಲಿ ವಿವಾಹ ನಡೆಯುವಂತಿಲ್ಲ. ವೇಷಭೂಷಣ, ಆಹಾರಪಾನೀಯ, ಗುಡಿಸಿಲ ನಿರ್ಮಾಣ ಹಾಗೂ ಕೆಲವು ನಂಬಿಕೆ ಆಚರಣೆಗಳಿಗೆ ಸಂಬಂಧಿಸಿದಂತೆ ಕುಲಗಳಲ್ಲಿ ಭೇದವಿದೆ. ಏಕಪತ್ನಿತ್ವ ಪದ್ಧತಿ ಚಾಲ್ತಿಯಲ್ಲಿದೆ. ಬಹುಪತ್ನಿತ್ವಕ್ಕೆ ಅವಕಾಶವಿದ್ದರೂ ವಿರಳ. ಪ್ರೇತಪೂಜೆ ಸಾಮಾನ್ಯ. 

	ಸಂತಾಲರು ಕಷ್ಟ ಜೀವಿಗಳು. ಇವರ ಗುಡಿಸಲುಗಳು ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿರುತ್ತವೆ. ಇವರದು ಶುಚಿ ಜೀವನ. ಇವರ ಜೀವನಾಧಾರ ಮುಖ್ಯವಾಗಿ ಕೃಷಿ, ಆಹಾರ ಸಂಗ್ರಹಣೆ, ಬೇಟೆ ಮತ್ತು ಮೀನುಗಾರಿಕೆಯನ್ನು ಅವಲಂಬಿಸಿದೆ. ಶ್ರಮಸಾಧ್ಯ ಕೆಲಸಗಳನ್ನು ಗಂಡಸರೂ ಬೀಜ ಬಿತ್ತುವುದು, ದವಸ ಮಾಡುವುದು ಮುಂತಾದ ಸುಲಭಸಾಧ್ಯ ಕೆಲಸಗಳನ್ನು ಹೆಂಗಸರೂ ನಿರ್ವಹಿಸುತ್ತಾರೆ. ಕೋಳಿ, ಹಂದಿ, ದನ, ಎಮ್ಮೆ, ಕುರಿ ಸಾಕಣೆ ಉಪಕಸಬು. ಇವರು ಬಲುಮಟ್ಟಿಗೆ ಎಲ್ಲ ಪ್ರಾಣಿಗಳನ್ನೂ ಗೆಡ್ಡೆಗೆಣಸುಗಳನ್ನೂ ಸೇವಿಸುತ್ತಾರೆ. ನಿಸರ್ಗವನ್ನು ಅತಿಯಾಗಿ ಪ್ರೀತಿಸುವ ಇವರಿಗೆ ಕುಡಿಯಲು ಮತ್ತು ತಿನ್ನಲು ಇದ್ದರೆ ಇವರಷ್ಟು ಪರಮ ಸುಖಿಗಳು ಮತ್ತೊಬ್ಬರಿಲ್ಲ. 

	ಸಂತಾಲರ ಧರ್ಮ ಸರ್ವಚೇತನವಾದಕ್ಕೆ ಇಂಬುಕೊಡುವಂಥದ್ದು. ಇವರಿಗೆ ತಮ್ಮ ಪರಿಸರ, ಗುಡ್ಡಬೆಟ್ಟಗಳು, ಚಿಲುಮೆಗಳು, ತೋಪುಗಳು, ಕಣಿವೆಗಳು ಪವಿತ್ರವಾದವು; ಪೂಜನೀಯವಾದವು. ಅತಿಮಾನುಷ ಶಕ್ತಿಗಳಲ್ಲಿ ಅಚಲ ನಂಬಿಕೆ. ಠಾಕೂರ್ ಇವರ ಪ್ರಧಾನ ದೈವ. ಈ ದೈವವನ್ನು ಅವರು ಕಂದು (ಸೂರ್ಯ) ಎಂದೂ ಕರೆಯುತ್ತಾರೆ. ಮತಾಚರಣೆಗಳಲ್ಲಿ ಸೂರ್ಯ ಹುಟ್ಟುವ ದಿಕ್ಕಿಗೆ ವಿಶೇಷ ಮಹತ್ತ್ವವಿದೆ. ಉಳಿದ ದೈವಗಳನ್ನು ಆರಾಧಿಸುವಾಗ ಕೂಡ ಪೂರ್ವಕ್ಕೆ ಮುಖ ಮಾಡಿ ಕೂರುತ್ತಾರೆ. ಇವರು ನಂಬುವ ದೈವಗಳು ಹಲವಾರು. ಈ ದೈವಗಳ ಪೂಜಾಕಾರ್ಯಗಳನ್ನು ನೆರವೇರಿಸಲು ಪ್ರತಿನೆಲೆಯಲ್ಲಿಯೂ ಇಬ್ಬರು ಪೂಜಾರಿಗಳಿರುತ್ತಾರೆ. ಈ ಪೂಜಾರಿಗೆ ನಾಯೆಕೆ ಎಂದೂ ಅವನ ಸಹಾಯಕನಿಗೆ ಕುಡಮ್ ನಾಯೆಕೆ ಎಂದೂ ಹೆಸರು. 

	ಇವರದು ವ್ಯವಸ್ಥಿತ ಸಮಾಜ. ಗ್ರಾಮಾಡಳಿತ ವ್ಯವಸ್ಥೆಯಲ್ಲಿ ಏಳು ಮಂದಿ ಬುದ್ಧಿವಂತರು ಇರುತ್ತಾರೆ : ಒಬ್ಬ ಮುಖಂಡ (ಮಂಜಿಹಿ), ಒಬ್ಬ ಉಪಮುಖಂಡ (ಪರನಿಕ್), ಗ್ರಾಮದ ನೀತಿ ನಿರೂಪಣೆಯನ್ನು ರೂಪಿಸುವವ ಒಬ್ಬ (ಜೋಗ್ ಮಂಜಿಹಿ), ಅವನ ಸಹಾಯಕನೊಬ್ಬ (ಜೋಗ್ ಪರನಿಕ್), ಒಬ್ಬ ದೂತ (ಗಾಡೆಟ್) ಮತ್ತು ಇಬ್ಬರು ಧಾರ್ಮಿಕ ಕಾರ್ಯಕರ್ತರು. ಈ ಪದಾಧಿಕಾರಿಗಳಿಗೆ ಅಧಿಕಾರ ವಂಶಪಾರಂಪರ್ಯ ವಾಗಿ ಬಂದಿರುತ್ತದೆ.

	ಇವರಲ್ಲಿ ಉತ್ತಮವಾದ ರಾಜಕೀಯ ಹಾಗೂ ಆಡಳಿತಾತ್ಮಕ ಸಂಘಟನೆಗಳುಂಟು. ಇವು ಗ್ರಾಮಮಟ್ಟದ ಜೀವನವನ್ನು ನಿಯಂತ್ರಿಸುವುದ ರೊಂದಿಗೆ ಹೊರಪ್ರಪಂಚದ ಸಂಬಂಧವನ್ನು ಕೂಡ ನಿರ್ದೇಶಿಸುತ್ತವೆ. ಐವರು ಸದಸ್ಯರಿರುವ ಇವರ ಆಡಳಿತಾತ್ಮಕ ಸಂಘಟನೆಗೆ ಮೋರ್‍ಹಾರ್ ಎಂದು ಹೆಸರು. ಎಲ್ಲ ಬಗೆಯ ಅಪರಾಧಗಳನ್ನು ತನಿಖೆ ಮಾಡುವ ಹಕ್ಕು ಈ ಒಳಾಡಳಿತ ವ್ಯವಸ್ಥೆಗಿದೆ. ಸಂತಾಲರಲ್ಲಿ ತಮ್ಮ ಬುಡಕಟ್ಟಿನ ಜನರಿಗೆ ನ್ಯಾಯ ಒದಗಿಸಲು ನ್ಯಾಯಾಲಯಗಳಿವೆ. ಅವಕ್ಕೆ ಲೊಬೀರ್ ಎಂದು ಹೆಸರು. ವರ್ಷದಲ್ಲೊಂದು ದಿನ ಬೇಟೆಯ ನೆಪದಲ್ಲಿ ಇಡೀ ಬುಡಕಟ್ಟು ಜನ ಒಂದೆಡೆ ಸೇರುವ ಸ್ಥಳವೂ ಅದಾಗಿರುತ್ತದೆ. ಬೇಟೆ ಮತ್ತಿತರ ಕೌಟುಂಬಿಕ ಕಾರಣಗಳಿಗಾಗಿ ಮನಸ್ತಾಪ ಉಂಟಾದಾಗ ಅದನ್ನು ಬಗೆಹರಿಸಲು ಈ ನ್ಯಾಯಾಲಯದ ಮೊರೆ ಹೋಗುತ್ತಾರೆ. ಬೇಟೆಯ ವ್ಯವಸ್ಥಾಪಕನೇ ಸಭೆಯ ಅಧ್ಯಕ್ಷತೆ ವಹಿಸುತ್ತಾನೆ. ಹಿಂದಿನ ಸಭೆಗಳ ತೀರ್ಮಾನಗಳನ್ನು ಮರುಪರಿಶೀಲನೆಗೊಡ್ಡುವ ಅಧಿಕಾರ ಆ ಸಭೆಗೆ ಇರುತ್ತದೆ. ಅನೀತಿಯುತವಾಗಿ ನಡೆದುಕೊಂಡವರನ್ನು ಬುಡಕಟ್ಟಿ ನಿಂದ ಹೊರಹಾಕುವ ಹಕ್ಕು ಈ ಸಭೆಗೆ ಮಾತ್ರ ಇರುತ್ತದೆ. 

	ಇವರು ಆಡುವ ಸಂತಾಲಿ ಭಾಷೆ ಮುಂಡಾ ಭಾಷಾವರ್ಗಕ್ಕೆ ಸೇರಿದ ಯೋಗಾತ್ಮಕ ಭಾಷೆ. ಇದನ್ನು ಭಾಷಾವಿe್ಞÁನಿಗಳು ಆಸ್ಟ್ರಿಕ್ ಭಾಷಾ ಪರಿವಾರದಲ್ಲಿ ವರ್ಗೀಕರಿಸಿದ್ದಾರೆ. ಇದು ಭಾರತದ ಬುಡಕಟ್ಟು ಭಾಷೆಗಳಲ್ಲಿ ಅತ್ಯಂತ ಹಳೆಯದು. ಕ್ಯಾಂಪ್‍ಬೆಲ್ ಪ್ರಕಾರ ಇದು ಇತರ ಸೋದರ ಭಾಷೆಗಳಿಗಿಂತ ಉನ್ನತ ಸ್ತರದ ಬೆಳೆವಣಿಗೆ ಪಡೆದಿದೆ. ಈ ಭಾಷೆಗೆ ಲಿಪಿಯಿಲ್ಲ. ಸದ್ಯಕ್ಕೆ ರೋಮನ್ ಲಿಪಿಯನ್ನು ಬಳಸಲಾಗುತ್ತಿದೆ. 

	ಸಂತಾಲರ ಮೂಲ ವಿವರಿಸುವ ಯಾವ ಲಿಖಿತ ಆಧಾರಗಳೂ ಈತನಕ ಲಭ್ಯವಿಲ್ಲ. ಭಾರತದ ಇತರ ಸಮುದಾಯಗಳಂತೆ ಇವರು ಕೂಡ ಇಲ್ಲಿಯ ಮೂಲವಾಸಿಗಳ ಪರಂಪರೆಗೆ ಸೇರಿದವರೆಂಬುದನ್ನು ಇವರಲ್ಲಿ ಪ್ರಚಲಿತವಿರುವ ಜಾನಪದ ಸಮರ್ಥಿಸುತ್ತದೆ. ದೇಶದ ಇತರ ಜಾತಿ, ಬುಡಕಟ್ಟುಗಳಂತೆ ಇವರು ಕೂಡ ಪ್ರಪಂಚ ಸೃಷ್ಟಿಯ ವೈಚಿತ್ರ್ಯಗಳ ಬಗೆಗಿನ ತಮ್ಮ ವಿಚಿತ್ರ ಕಲ್ಪನೆಗಳನ್ನು ಜನಪದ ಸಾಹಿತ್ಯದಲ್ಲಿ ಉಳಿಸಿಕೊಂಡು ಬಂದಿದ್ದಾರೆ. ಬುಡಕಟ್ಟಿನ ಸಂಘಟನೆಯನ್ನು ಬಲಪಡಿಸಿ ಕೊಳ್ಳುವುದಕ್ಕಾಗಿ, ಜೀವನ ಮಟ್ಟವನ್ನು ಸುಧಾರಿಸಿ ಕೊಳ್ಳುವುದಕ್ಕಾಗಿ ಮತ್ತು ಆತ್ಮವಿಶ್ವಾಸವನ್ನು ಹೊಂದುವುದಕ್ಕಾಗಿ ಇವರು ಪರಂಪರಾಗತ ಮೌಲ್ಯಗಳಿಗೆ ಮತ್ತು ನಂಬಿಕೆಗಳಿಗೆ ಹೆಚ್ಚು ಆತುಕೊಂಡಿದ್ದಾರೆ. ಇಂದಿಗೂ ಇವರಿಗೆ ಮಾಯಮಾಟಗಳಲ್ಲಿ ಅಪಾರ ನಂಬಿಕೆ. 

	ಇವರಲ್ಲಿ ಚಾಲ್ತಿಯಲ್ಲಿರುವ ಜನಪದ ಕಥೆಗಳು ಇವರ ಧಾರ್ಮಿಕ ಹಾಗೂ ಸಾಮಾಜಿಕ ಜೀವನದ ವೈಶಿಷ್ಟ್ಯವನ್ನು ಪರಿಚಯಿಸುತ್ತವೆ. ಕಥೆಗಳಂತೆಯೇ ಪುರಾಣ, ಐತಿಹ್ಯಗಳು ಸಂತಾಲರ ವಿಶಿಷ್ಟಕಲ್ಪನೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಒಗಟು ಮತ್ತು ಹಾಡುಗಳು ಇವರಲ್ಲಿ ಹೆಚ್ಚು ಪ್ರಚುರವಾಗಿವೆ. ಇವರ ಹಾಡುಗಳಲ್ಲಿ ಪ್ರಣಯದ ಹಾಡುಗಳು ಅಧ್ಯಯನಾಸಕ್ತರ ಗಮನ ಸೆಳೆದಿವೆ. ಇವನ್ನು  ಕಾಡಿನ ಹಾಡುಗಳು (ಬಿರ್‍ಸೆರೆನ್) ಎಂದು ಕರೆಯಲಾಗಿದೆ. ಇವು ನಾಲ್ಕು ಪಾದಗಳ ಲಯಬದ್ಧ ರಚನೆಗಳು. ಇವುಗಳಲ್ಲಿ ಅಶ್ಲೀಲತೆ ಹೆಚ್ಚಾಗಿದ್ದು ಶೃಂಗಾರ ಪೂರ್ಣವಾಗಿವೆ. ಕೆಲವು ರಸಿಕ ಹಾಡುಗಾರರು ತಮ್ಮ ಹಾಡುಗಳಲ್ಲಿಯ ಅಶ್ಲೀಲ ಪದಗಳಿಗೆ ಬಂಗಾಲಿ ಪದಗಳನ್ನು ಪರ್ಯಾಯವಾಗಿ ಬಳಸಿ ಹಾಡುವುದನ್ನು ರೂಢಿಸಿಕೊಂಡಿದ್ದಾರೆ. 

	ಸಂತಾಲರು ಹಬ್ಬ ಹರಿದಿನಗಳಲ್ಲಿ ಹಾಡುವುದು, ಕುಣಿಯುವುದು ಮತ್ತು ಡೋಲು ಬಡಿಯುವುದು ಸಾಮಾನ್ಯ. ಬಹ ಮತ್ತು ಸೊಹ್ರ ಹಬ್ಬಗಳಲ್ಲಿ ಹಾಡು ಕುಣಿತಗಳಿರಲೇಬೇಕು. ಈ ಹಬ್ಬಗಳಲ್ಲಿ ಲಾಗ್ರೆಸೆರೆನ್ ಹಾಡು ಹಾಡುವುದು ಸಂಪ್ರದಾಯ. ಸಂಭ್ರಮದ ಸಂದರ್ಭಗಳಲ್ಲಿ ಡೊನ್‍ಸೆರೆನ್ ಹಾಡು ಹಾಡಲಾಗುವುದು. ಸುಗ್ಗಿಕಾಲದಲ್ಲಿ ಹಾಡುವ ಹಾಡುಗಳಿಗೆ ಸೊಹ್ರ್‍ಸೆರೆನ್ ಎನ್ನುತ್ತಾರೆ. ವಸಂತಕಾಲದಲ್ಲಿ ಮತ್ತು  ಬಿಹೂ  ಹಬ್ಬದಲ್ಲಿ  ಹಾಡುವ ಹಾಡುಗಳಿಗೆ ಕ್ರಮವಾಗಿ ದಾಹರ್‍ಸೆರೆನ್ ಮತ್ತು ಬಹಾ ಎನ್ನುತ್ತಾರೆ. ಸಂತಾಲರ ಹಾಡುಗಳಲ್ಲಿ ಮೂರು ಬಗೆಗಳನ್ನು ಹೀಗೆ ಗುರುತಿಸಬಹುದು : ಯುವ ಪ್ರೇಮಿಗಳು ಯಾವ ನಿರ್ಬಂಧವೂ ಇಲ್ಲದೆ ಕಾಡಿನಲ್ಲಿ ಹಾಡಿಕೊಂಡು ನರ್ತಿಸುವಂಥವು; ಅಶ್ಲೀಲ ಪದಗಳು-ಇವು ಬೇಟೆಯ ಕಾಲದಲ್ಲಿ ಮತ್ತು ಯಾರನ್ನಾದರೂ ಬುಡಕಟ್ಟಿನಿಂದ ಹೊರಹಾಕುವ  ಸಂದರ್ಭದಲ್ಲಿ ಹಿರಿಯರು ಹಾಡುವಂಥವು. ಹಬ್ಬದ ಹಾಡುಗಳು-ಇವು ಬುಡಕಟ್ಟಿನ ಜನ ಸಾಮೂಹಿಕವಾಗಿ ಕಲೆತಾಗ ಹಾಡುವಂಥವು.

	ಅಸನ್‍ಸೋಲ್ ಬಳಿಯ ಕಲ್ಲಿದ್ದಲ ಗಣಿಗಳಲ್ಲಿ ಅಥವಾ ಜೆಮ್‍ಷೆಡ್ ಪುರದಲ್ಲಿರುವ ಉಕ್ಕು ಕಾರ್ಖಾನೆಗಳಲ್ಲಿ ಹಲವಾರು ಸಂತಾಲರು ಉದ್ಯೋಗಿಗಳಾಗಿದ್ದಾರೆ. ಮತ್ತೆ ಕೆಲವರು ಕೃಷಿಕಾರ್ಮಿಕ ರಾಗಿದ್ದಾರೆ. ವ್ಯವಸಾಯಭೂಮಿ ಹೊಂದಿರುವವರ ಮುಖ್ಯ ಬೆಳೆ ಬತ್ತ.     						
					(ಎ.ಎಚ್.)
	ಭಾಷೆ : ಆಸ್ಟ್ರಿಕ್ ಭಾಷಾಪರಿವಾರದ ಮುಂಡಾ ವರ್ಗಕ್ಕೆ ಸೇರಿದ ಸಂತಾಲಿ ಇವರ ಮಾತೃಭಾಷೆ. ಸವೊತಾಲ್ ಅಥವಾ ಸವೊತಾರ್ ಎಂಬುದರ ಅಪಭ್ರಂಶ ರೂಪವೇ ಸಂತಾಲ್ ಎಂದು ಸ್ಕ್ರೆಫ್‍ಸ್ರುದ್ ಅಭಿಪ್ರಾಯಪಟ್ಟಿದ್ದಾನೆ. ಯುರೋಪಿಯನ್ನರ ಸಂಪರ್ಕ ಪಡೆದ ತರುವಾಯ ಸ್ಥಳೀಯರು ಸಂತಾಲ್, ಸಂತಾಲಿ ಎಂದೇ ವ್ಯವಹರಿಸಲು ತೊಡಗಿದರು. ಸಂತಾಲಿಯಲ್ಲಿ 5 ಹ್ರಸ್ವ 5 ದೀರ್ಘ ಸ್ವರಗಳಿವೆ. ಈ ಎಲ್ಲ ಸ್ವರಗಳನ್ನು ನಾಸಿಕೀಕರಣ ಮಾಡುತ್ತಾರೆ. ಹೀಗಾಗಿ ಅರ್ಥಭೇದವನ್ನು ಗುರುತಿಸುತ್ತಾರೆ. ಸಂಧ್ಯಕ್ಷರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಚಿe, ಚಿo, ಚಿi, ಚಿu, iಚಿ, io, iu, oಚಿ, oe, uಚಿ, ui ಇತ್ಯಾದಿ. ವ್ಯಂಜನಗಳಲ್ಲಿ ಧ್ವಯೋಷ್ಠ್ಯ, ದಂತ್ಯ ವತ್ಸ್ರ್ಯ, ಮೂರ್ಧನ್ಯ, ತಾಲವ್ಯ ಕಾಕಲ್ಯ, ಅನುನಾಸಿಕ ಧ್ವನಿಗಳಿವೆ. ಅನ್ಯಭಾಷಾ ಪ್ರಭಾವದಿಂದಾಗಿ ಸಂತಾಲಿಗೆ ಹಲವಾರು ಧ್ವನಿಗಳು ಸ್ವೀಕೃತಗೊಂಡಿವೆ. ಹಿಂದಿ ಭಾಷಾಪ್ರಭಾವ ಹೆಚ್ಚಾಗಿದೆ. ಸಂತಾಲಿಯಲ್ಲಿ ಅರ್ಧವ್ಯಂಜನಗಳ ಬಳಕೆ ಹೆಚ್ಚು. ಅವಿಭಾಜಕ ಧ್ವನಿಮಾಗಳಾದ ದೀರ್ಘತೆ (:) ಸ್ವರಾಘಾತ (? ? ?), ವಿರಾಮ (+), ಅನುನಾಸಿಕತೆ (~) - ಇವು ಪದಗಳಲ್ಲಿ ಅರ್ಥವ್ಯತ್ಯಾಸ ತರಬಲ್ಲವು. ಪೂರ್ವಪ್ರತ್ಯಯ, ಅಂತ್ಯಪ್ರತ್ಯಯಗಳಂತೆಯೇ ಮಧ್ಯಪ್ರತ್ಯಯಗಳು ಸೇರುತ್ತವೆ. -ಕ್-, -ತ್-, -ನ್- ಮತ್ತು -ಪ್- ಎಂಬ ಧ್ವನಿಗಳು ಮಧ್ಯಪ್ರತ್ಯಯಗಳಾಗಿ ಹೆಚ್ಚು ಬಳಕೆಯಲ್ಲಿವೆ. ಸನ್ನಿವೇಶ ಸಂದರ್ಭಗಳಿಗನುಗುಣವಾಗಿ ಕೆಲವು ಪದಗಳು ನಾಮಪದ, ಗುಣವಾಚಕ, ಕ್ರಿಯಾಪದವಾಗಿ ಕಾಣಿಸಿ ಕೊಳ್ಳುತ್ತವೆ. ಎರಡು ಬಗೆಯ (ಸ್ತ್ರೀಲಿಂಗ, ಪುಲ್ಲಿಂಗ) ಲಿಂಗವ್ಯವಸ್ಥೆ, ಮೂರು ಬಗೆಯ (ಏಕ, ದ್ವಿ, ಬಹು) ವಚನ ವ್ಯವಸ್ಥೆಯುಂಟು. ಉದಾ: ಹಾಡ್ (ಮನುಷ್ಯ), ಹಾಡ್‍ಕಿನ್ (ಇಬ್ಬರು ಮನುಷ್ಯರು), ಹಾಡ್‍ಕೋ (ಎರಡಕ್ಕಿಂತ ಹೆಚ್ಚು ಮನುಷ್ಯರು). ಇದೇ ರೀತಿ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಸೂಚಕ ಪ್ರತ್ಯಯಗಳು ಪ್ರತ್ಯೇಕವಾಗಿವೆ. ನಾಮಪದಗಳನ್ನು ಸಜೀವ ವಾಚಕ ನಿರ್ಜೀವ ವಾಚಕ ಎಂದು ವರ್ಗೀಕರಿಸಿ ಕೊಳ್ಳಲಾಗಿದೆ. ಈ ಪೈಕಿ ನಿರ್ಜೀವವಾಚಕ ಶಬ್ದಗಳು ಸಾಮಾನ್ಯವಾಗಿ ಸ್ತ್ರೀಲಿಂಗ ವಾಚಕ ಶಬ್ದಗಳಾಗಿರುತ್ತವೆ. ವಿಭಕ್ತಿ ಪ್ರತ್ಯಯಗಳ ಪೈಕಿ ದ್ವಿತೀಯ, ಚತುರ್ಥಿಗಳಿಲ್ಲ. -ರಾ, -ರಾನ್ ಎಂಬವು ಷಷ್ಠೀ ವಿಭಕ್ತಿ ಪ್ರತ್ಯಯಗಳು. ಸಂಖ್ಯಾವಾಚಕಗಳು ಒಂದರಿಂದ ಹತ್ತರವರೆಗೆ ಒಂದು ನಿರ್ದಿಷ್ಟ ಕ್ರಮವನ್ನೇ ಅನುಸರಿಸುತ್ತವೆ. ಸಂಖ್ಯಾವಾಚಕ ರೂಪಗಳಿಂದಲೇ ಬೇರೆ ಬೇರೆ ಸಂಖ್ಯಾವಾಚಕ ರೂಪಗಳನ್ನು ರಚಿಸಿಕೊಳ್ಳಬಹುದು. ಇಸಿ ಇಪ್ಪತ್ತು, ಸೇ ನೂರು, ಹಜಾರ್ ಸಾವಿರ ಎಂಬವು ಅನ್ಯಭಾಷೆಗ ಳಿಂದ ಸ್ವೀಕೃತಗೊಂಡಿವೆ. ಕೆಲವು ಪದಗಳನ್ನು ಒಂದಕ್ಕಿಂತ ಹೆಚ್ಚು ಸಾರಿ ಉಚ್ಚಾರ ಮಾಡಿದರೆ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥಗಳನ್ನು ಸೂಚಿಸುತ್ತವೆ. 

	ಕ್ರಿಯಾಧಾತುಗಳಿಗೆ ಕಾಲಸೂಚಕ ಮತ್ತು ಅರ್ಥಸೂಚಕ ಪ್ರತ್ಯಯಗ ಳನ್ನು ಹಚ್ಚುವುದರ ಮೂಲಕ ಬೇರೆ ಬೇರೆ ಅರ್ಥಗಳಲ್ಲಿ ಅವನ್ನು ಬಳಸಿಕೊಳ್ಳಬಹುದಾದ ಸಾಧ್ಯತೆಗಳಿವೆ. ಉತ್ತಮ ಪುರುಷ ಬಹುವಚನ ಸರ್ವನಾಮರೂಪಗಳಲ್ಲಿ ಅವ್ಯಾವರ್ತಕ ಮತ್ತು ವ್ಯಾವರ್ತಕ ಭೇದವನ್ನು ಕಾಣಬಹುದು. ಉದಾ: ಅಲೆ ನಾವು (ಕೇಳುವವನು ಸೇರಿ), ಅಬೊಸ್ (ಕೇಳುವವನನ್ನು ಬಿಟ್ಟು). ಈ ಪೈಕಿ ಮೊದಲನೆಯದು ಅವ್ಯಾವರ್ತಕ, ಎರಡನೆಯದು ವ್ಯಾವರ್ತಕ. ಸಂಬಂಧಸೂಚಕ ಸರ್ವನಾಮ ಪ್ರಧಾನವಾಗಿ ರುವ ವಾಕ್ಯಗಳು ಕಡಿಮೆ. ಕೃದಂತ ವಿಶೇಷಣಗಳ ಬಳಕೆ ಹೆಚ್ಚು. ಅವ್ಯಯಗಳು ಸ್ವತಂತ್ರ ಪದಗಳಂತೆ ಕಾಣಿಸಿಕೊಳ್ಳುತ್ತವೆ. ಹಿಂದಿ, ಬಂಗಾಳಿ, ಕೊಲಾಮಿ, ಪರ್ಜಿ, ಸವಾರ ಮೊದಲಾದ ಭಾಷಾಪ್ರಭಾವವನ್ನು ಸಂತಾಲಿಯಲ್ಲಿ ಗುರುತಿಸಬಹುದು.	
 			
     (ಆರ್.ಎಮ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ